ಈ ಬ್ಲಾಗ್ನಿಂದ ಹುಡುಕಿ

Main Menu

ಗುರುವಾರ, ಏಪ್ರಿಲ್ 5, 2012

"ಬ್ರಹ್ಮ ಲಿಪಿ"

ಒಂದು ಊರಿನಲ್ಲಿ ಒಬ್ಬ ರಾಜಕುಮಾರನಿದ್ದ. ಅವನು ರಾಜಕುಮಾರನಾಗಿದ್ದರೂ ಯಾಕೋ ಅವನ ಮನಸ್ಸಿಗೆ ನೆಮ್ಮದಿಯಿರಲಿಲ್ಲ. ಒಂದಿಲ್ಲೊಂದು ಸಮಸ್ಯೆಗಳು ಅವನನ್ನು ಕಾಡುತ್ತಲೇ ಇತ್ತು. ಇಡೀ ಜೀವನವೇ ಬೇಡವೆನಿಸುತ್ತಿತ್ತು. ಆದ್ದರಿಂದ ಇನ್ನು ಬದುಕುದಕಿಂತ ಸಾಯುವುದೇ ಲೇಸು ಎಂದರಿತ ಅವನು ಹಗ್ಗವನ್ನು ಹಿಡಿದು ಕಾಡಿಗೆ ಹೊರಟ. ಆಗ ದಾರಿಮಧ್ಯೆಯಲ್ಲಿ ಬ್ರಹ್ಮದೇವನು ಎದುರಾಗಿ ನೀನೆಲ್ಲಿಗೆ ಹೊರಟಿರುವಿ ಎಂದು ಪ್ರಶ್ನಿನಿಸಿದಾಗ ನಾನು ನೇಣು ಹಾಕಿಕೊಂಡು ಸಾಯಲು ಸಿದ್ಧನಾಗಿ ಹೋಗುತ್ತಿದ್ದೇನೆ ಎಂದು ತನ್ನ ವೃತ್ತಾಂತವನ್ನು ತಿಳಿಸುತ್ತಾನೆ. ಆಗ ಚಕಿತನಾದ ಬ್ರಹ್ಮದೇವನು ನೀನು ಸಾಯುವುದೇ...? ಇದು ನಿನ್ನ ಕನಸಿನ ಮಾತು. ಅಲ್ಲಾ...! ಇನ್ನು ನಿನ್ನ ಜೀವನದಲ್ಲಿ ಏನೆಲ್ಲಾ ಆಗ್ಲಿಕ್ಕಿದೆ ಮಾರಯ. ಅದು ಬಿಟ್ಟು ನೀನು ಸಾಯ್ಲಿಕ್ಕೆ ಮುಂದಾಗಿದ್ಯಲ್ವಾ...? ಎಂದು ಅವನ ಜೀವನದ ಬಗ್ಗೆ ಅರಿವು ಮೂಡಿಸಿದ. ಇದನ್ನು ಕೇಳಿ ಚಿಂತಾಕ್ರಾಂತನಾದ ರಾಜಕುಮಾರ ನನ್ನಿಂದ ಇನ್ನು ಏನಾಗಬೇಕಾಗಿದೆ ಎಂದು ಬಹಳ ಆಶ್ಚರ್ಯದಿಂದ ಪ್ರಶ್ನಿನಿಸಿದ. ಆಗ ನೀನು ಇನ್ನೂ ಚಿಕ್ಕವ, ಇನ್ನು ದೊಡ್ಡದಾಗಿ ಬೆಳೆಯಲಿಕ್ಕಿದೆ, ಆನಂತರ ಮದುವೆಯಾಗಿ ರಾಜ್ಯಭಾರ ಮಾಡುವಂತಹ ಭಾಗ್ಯ ನಿನಗಿದೆ. ಎಂದು ಅವನ ಭವಿಷ್ಯವನ್ನು ನುಡಿದ. ಇದನ್ನು ಕೇಳಿ ಆಶ್ಚರ್ಯಚಕಿತನಾದ ರಾಜಕುಮಾರ ಮದುವೆಯಾಗಲು ಹೆಣ್ಣು ಯಾರೆಂದು ಕೇಳಿದಾಗ ನಿನ್ನ ಸಾಮ್ರಾಜ್ಯದಲ್ಲಿರುವ ಮನುಷ ವರ್ಗದ ಮಹಿಳೆಯೋರ್ವಳ ಮಗಳೊಬ್ಬಳು ನಿನ್ನ ಹೆಂಡತಿಯಾಗಳಿರುವಳು. ಆದರೆ ಅವಳು ಇನ್ನೂ ತಾಯ ಹೊಟ್ಟೆಯಲ್ಲಿಯೇ ಬೆಳೆಯುತ್ತಿದ್ದಾಳೆ ಎಂದು ತಿಳಿಸುತ್ತಾನೆ. ಆಗ "ಉಚ್ಚ ಕುಲದಲ್ಲಿ ಹುಟ್ಟಿ ಬೆಳೆದ ನಾನು ಕೆಳವರ್ಗದ ಹುಡುಗಿಯನ್ನು ಮದುವೆಯಾಗಿ ರಾಜ್ಯಭಾರ ಮಾಡುವುದಾದರೂ ಹೇಗೆ, ಪ್ರಜೆಗಳು ಏನು ಹೇಳಲಿಕ್ಕಿಲ್ಲ" ಎಂದು ಚಿಂತಾಜನಕನಾಗಿ ಆಯ್ತು ನಾನು ಸಾಯೋದಿಲ್ಲ ಎಂದು ಭಾಷೆಯಿಟ್ಟು ಹಿಂತಿರುಗಿ ಅವಳ ಜನನವನ್ನೇ ಕಾಯುತ್ತಿದ್ದ. ಸ್ವಲ್ಪ ದಿನದ ನಂತರ ಮಗುವಿನ ಜನನದ ವಾರ್ತೆಯನ್ನು ಕೇಳಿ ಅವರ ಮನೆಗೆ ತೆರಳಿದ ಆತ ಆ ಮಗುವಿನ ತಾಯಿಯಲ್ಲಿ ಮಗುವನ್ನು ನೋಡಲು ಕೊಡಿ ಎಂದು ಕೇಳಿದಾಗ, "ಕೆಳವರ್ಗದಲ್ಲಿ ಹುಟ್ಟಿದ ಮಗುವನ್ನು ಉಚ್ಚ ಕುಲದಲ್ಲಿ ಹುಟ್ಟಿದ ನೀವು ಮುಟ್ಟಿದರೆ ನಿಮ್ಮ ಕುಲಕ್ಕೆ ಹಾನಿಯಾಗಬಹುದು, ಕುಲಕ್ಕೆ ಅಪಕೀರ್ತಿ ಒದಗಬಹುದು" ಎಂದು ಹೇಳಿ ಮಗುವನ್ನು ನೀಡಲು ಹಿಂಜರಿಯುತ್ತಾಳೆ. ಅದಕ್ಕಂಜದ ರಾಜಕುಮಾರ ಮಕ್ಕಳೆಂದರೆ ದೇವರಿಗೆ ಸಮಾನವಂತೆ ಆದ್ಧರಿಂದ ಯಾವುದೇ ಮಗುವನ್ನು ಮುಟ್ಟಿದರೆ ಅದು ಕುಲಕ್ಕೆ ಅಪಕೀರ್ತಿ ತರಲಾರದು ಉಚ್ಚಕುಲವಾದರೇನು ನಾನು ಅದಕ್ಕೆ ಮಹತ್ವ ಕೊಡೋದಿಲ್ಲ, ಎಂದು ಒತ್ತಾಯಪಡಿಸುತ್ತಾನೆ. ಆತನ ಒತ್ತಯಕ್ಕೆ ಮಣಿದ ಅವಳು ಕೈಯಲ್ಲಿ ಬರೀಮೈಯಲ್ಲಿದ್ದ ಮಗುವನ್ನು ಅವನಿಗೆ ನೀಡುತ್ತಾಳೆ. ಅದನ್ನು ಪಡೆದುಕೊಂಡ ಅವನು ಒಂದು ಬಟ್ಟೆಯನ್ನು ನೀಡೆಂದು ಕೇಳುತ್ತಾನೆ. ಆಗ ಅವಳು ಒಳಗೆ ನಡೆದಾಗ ಮಗುವನ್ನು ಎತ್ತಿಕ್ಕೊಂಡು ಸೀದಾ ಬಂದು ಉಚ್ಚಕುಲದಲ್ಲಿ ಹುಟ್ಟಿ ಬೆಳೆದ ನನಿಗೆ ನೀಚ ಕುಲದ ಹೆಣ್ಣು ಮಗು ದಕ್ಕಬಾರದು ಎಂದು ಹಟಗಟ್ಟಿ ಈ ಮಗುವನ್ನು ಹುಲಿ ತಿಂದೋಗಲಿ ಎಂದು ತನ್ನ ಮಾವನ ರಾಜ್ಯದೊಳಗಿನ ಹುಲಿಯ ಗುಹೆಯೊಂದರಲ್ಲಿ ಅಡಗಿಸಿಡುತ್ತಾನೆ. ಅವನ ಮಾವನಾದ ಅರಸನು ತನ್ನ ಊರಿನಲ್ಲಿ ಕಾಡುಪ್ರಾಣಿಗಳಿಂದ ತನ್ನ ಪ್ರಜೆಗಳಿಗಾದ ಹಾನಿಯಿಂದಾಗಿ ಬೇಟೆಯಾಡಲು ಆ ಕಾಡಿಗೆ ಬಂದಾಗ ಮಗುವಿನ ಅಳುವೊಂದು ಕೇಳುತ್ತದೆ. ಮದುವೆಯಾಗಿದ್ದರೂ ಯಾವುದೇ ಮಕ್ಕಳಿಲ್ಲದ ಆತ ಅದನ್ನು ಕೇಳಿ ಸಂತೋಷಗೊಂಡು ಆ ಕಡೆಗೆ ಮುನ್ನಡೆಯುತ್ತಾನೆ. ಆದರೆ ಸ್ವಲ್ಪಹೊತ್ತು ಯಾವುದೇ ಸ್ವರಗಳು ಕೇಳದೇ ಇದ್ದಾಗ ಬೇಸರಗೊಂಡ ಅವನಿಗೆ ತನ್ನ ಮಂತ್ರಿ "ಬೊಬ್ಬೆ ಹಾಕಿದಾಗ ಮಗು ಹೆದರಿ ಕಿರುಚಾಡಬಹುದು" ಎಂಬ ಉಪಾಯವನ್ನು ಹೇಳುತ್ತಾನೆ. ಅದಕ್ಕನುಸಾರವಾಗಿ ಬೇಟೆಯವರೆಲ್ಲರೂ ಜೋರಾಗಿ ಬೊಬ್ಬೆ ಹಾಕಿದಾಗ ಆ ಮಗು ಹೆದರಿಕೊಂಡು ಕಿರುಚಾಡಲು ಆರಂಭಿಸುತ್ತದೆ. ಆಗ ಮತ್ತೆ ಆ ಸ್ವರದ ಹತ್ತಿರ ಹೋಗಿ ಹುಲಿಯ ಗುಹೆಯಲ್ಲಿ ಮಗುವನ್ನು ಕಂಡು ಈ ಮಗು ಇಲ್ಲಿ ಹೇಗೆ ಬಂತು ಎಂದು ಆಶ್ಚರ್ಯಪಡುತ್ತಾನೆ. ಪರವಾಗಿಲ್ಲ ಇದು ನನಗೆ ದೇವರು ಕೊಟ್ಟ ವರ ಎಂದು ಭಾವಿಸಿ ತನ್ನ ಅರಮನೆಗೆ ನಡೆದು ಆ ಮಗುವನ್ನು ದೊಡ್ಡವಳಾಗುವವರೆಗೆ ಚೆನ್ನಾಗಿ ಸಾಕುತ್ತಾನೆ, ಮುಂದಕ್ಕೆ ಅವಳ ಮದುಮಗಳಾಚರಣೆ ಬರುತ್ತದೆ. ಅದಕ್ಕಾಗಿ ಊರಲ್ಲಿ ಢಂಗೂರವನ್ನು ಸಾರಿಸುತ್ತಾನೆ. ಮಗುವನ್ನು ತಪ್ಪಿಸಿಟ್ಟ ರಾಜಕುಮಾರನು ನನ್ನ ಪರಿಚಯ ಇನ್ನು ಯಾರಿಗೂ ಸಿಗಬಾರದು, ಮತ್ತು ಯಾರೂ ಹುಡುಕಿದರೂ ನಾನು ಸಿಗಬಾರದೆಂದು ತಲೆಮರಿಸಿಕೊಳ್ಳಲು ತನ್ನ ರಾಜ್ಯವನ್ನೇ ಬಿಟ್ಟು ಪಲಾಯನ ಗೈಯ್ಯುತ್ತಾನೆ. ಸುಮಾರು ವರ್ಷ ಯಾವುದೇ ಆಹಾರವಿಲ್ಲದೆ, ಅಲ್ಲಿಯೂ ನೆಮ್ಮದಿಯಿಲ್ಲದೇ ಬಿಕಾರಿಯಾಗಿ ಜೀವನ ನಡೆಸುತ್ತಾನೆ. ಇದರಿಂದ ಮತ್ತೆ ಬೇಸರಗೊಳ್ಳುತ್ತಾ ಮತ್ತೆ ಮತ್ತೆ ಸಮಸ್ಯೆಗಳ ಸಾಗರವಾಗುತ್ತಾನೆ. ಹಸಿವಿನಿಂದ ಕಂಗಲಾಗುತ್ತಾನೆ. ಹೀಗಿರುವಾಗ ಇಂತಹ ಒಂದು ಸಂದರ್ಭದಲ್ಲಿ ಅಲ್ಲಿನ ಯಾವನೋ ಒಬ್ಬ ಅವನನ್ನು ನೋಡಿ "ನೋಡು ಮಾರಯ ನಮ್ಮೂರಿನ ಅರಸರ ಮನೆಯಲ್ಲಿ ಇಂದು ಭಾರೀ ದೊಡ್ಡ ಕಾರ್ಯಕ್ರಮ ನಡೆಯುತ್ತಿದೆ ಅಲ್ಲದೇ ಇವತ್ತು ಒಳ್ಳೆಯ ಬೋಜನ ವ್ಯವಸ್ಥೆ ಕೂಡಾ ಇದೆ" ಎಂದು ಆ ಢಂಗೂರದ ವಿಷಯವನ್ನು ತಿಳಿಸುತ್ತಾನೆ. ಹಸಿವಿನ ಕಂಗಲಾಗಿದ್ದ ಈತ ಅವನ ಮಾತಿಗೆ ೦ಹೂ ಗೊಟ್ಟು ಮುನ್ನಡೆಯುತ್ತಾನೆ. ಅಲ್ಲಿಗೆ ಹೋದ ಆತ ಇವನೊಂದಿಗೆ ಊಟಕ್ಕೆ ಕುಳಿತುಕೊಂಡಾಗ ಅದೇ ಹೆಣ್ಣು ಮಗಳು ಊಟ ಬಡಿಸುತ್ತಾಳೆ. ಆಗ ಅವನ ಪರಿಚಯ ಕಂಡು ಹಿಡಿದ ಊರಿನ ಜನರು ಅಂದು ಮಗುವನ್ನು ತಪ್ಪಿಸಿಕೊಂಡು ಹೋದವ ಇವನೇ ಎಂದು ರಾಜನ ಮುಂದೆ ದೂರುತ್ತಾರೆ.(ಆದರೆ ಆ ಹೆಣ್ಣೆ ಆ ಮಗುವೆಂದು ಅವರಿಗೂ ಗೊತ್ತಿರೋದಿಲ್ಲ.) ಆಗ ಅಲ್ಲಿನ ರಾಜನು ಅವನನ್ನು ಆ ಮಗುವಿನ ಬಗ್ಗೆ ವಿಚಾರಿಸಿದಾಗ ಆ ಮಗುವನ್ನು ಹುಲಿಯ ಗುಹೆಯಲ್ಲಿಟ್ಟಿದ್ದೇನೆ ಎಂದು ಎಲ್ಲಾ ವೃತ್ತಾಂತವನ್ನು ತಿಳಿಸುತ್ತಾನೆ. ಆಗ ಅದನ್ನು ಕೇಳಿದ ಆ ಹೆಣ್ಣು , ರಾಜ, ಊರಿನವರೆಲ್ಲಾರೂ ಆಶ್ಚರ್ಯಚಕಿತರಾಗುತ್ತಾರೆ. ಅವನ ಆ ತಂತ್ರದ ಉದ್ದೇಶವನ್ನರಿತ ರಾಜ ಅವನಿಗೆ ಅವಳನ್ನೆ ಕೊಟ್ಟು ಮದುವೆ ಮಾಡಿಕೊಟ್ಟು ಅವನನ್ನು ತನ್ನ ಅಳಿಯನನ್ನಾಗಿ ಸ್ವೀಕರಿಸಿ ತನ್ನ ಸಾಮ್ರಾಜ್ಯವನ್ನು ಬ್ರಹ್ಮನ ಮಾತಿನಂತೆ ಅವನಿಗೆ ನೀಡಿ ಪಟ್ಟಾಭಿಷೇಕ ಮಾಡುತ್ತಾನೆ. ಎಲ್ಲರೂ ಸಂತೋಷದಿಂದ ಅವನನ್ನು ತಮ್ಮ ರಾಜನನ್ನಾಗಿ ಸ್ವೀಕರಿಸುತ್ತಾರೆ. ರಚನೆ-ಪ್ರಚಂಬಕ

1 ಕಾಮೆಂಟ್‌: